ಭಾನುದಾಸ
1448-1513. ಮರಾಠೀ ಭಕ್ತಕವಿ. ಹುಟ್ಟಿದ್ದು ಪೈಠಣದಲ್ಲಿ. ದಾಮಾಜೀ ಪಂತನ ಸಮಕಾಲೀನ. ವಿಟ್ಠಲ ಸಂಪ್ರದಾಯದ ಅಧ್ವರ್ಯು. ಚಿಕ್ಕಂದಿನಲ್ಲಿ ಸೂರ್ಯನ ಉಪಾಸಕನಾಗಿದ್ದ. ಅನಂತರ ರಕ್ಷಿಸುವುದಕ್ಕೆಂದು, ಅದನ್ನು ವಿಜಯನಗರಕ್ಕೆ ಒಯ್ದು, ವಿಜಯವಿಟ್ಠಲನ ಗುಡಿ ಕಟ್ಟಿಸಿ, ಅಲ್ಲಿ ಮೂರ್ತಿಯನ್ನು ಸಂಸ್ಥಾಪಿಸಿದ. ವಿಟ್ಠಲನ ಭಕ್ತಾಗ್ರಣಿಯಾದ ಈತ ವಿಜಯನಗರಕ್ಕೆ ಹೋಗಿ ಆ ಮೂರ್ತಿಯನ್ನು ಮರಳಿ ಪಂಢರಪುರಕ್ಕೆ ತಂದ. ಏಕನಾಥನ ಜೀವನದ ಮೇಲೆ ಈತನ ಪ್ರಭಾವ ಅಗಾಧವಾಗಿ ಆಗಿದೆ. ಈತ ಅನೇಕ ಅಭಂಗಗಳನ್ನು ರಚಿಸಿದ್ದಾನೆ.

ವಿಟ್ಠಲನ ನಾಮಸ್ಮರಣೆಯೊಂದೇ ನಮ್ಮ ಕುಲದ ನಿಯಮ. ನಾವಿನ್ನಾವ ಆಚಾರ-ವಿಚಾರಗಳನ್ನರಿಯೆವು. ಪಂಢರಿನಾಥ ರತ್ನಗಳ ಖಣಿ ಎಷ್ಟು ಅಪಹರಿಸಿದರೂ ಆ ಭಂಡಾರ ತುಂಬಿಯೇ ಉಳಿಯುವುದು ಎಂದು ಭಾನುದಾಸ ಸಾರಿದ್ದಾನೆ. ಒಮ್ಮೆ ದೇವರ ಹಾರವನ್ನು ಕದ್ದ ಆರೋಪದಿಂದ ಈತನನ್ನು ಗಲ್ಲಿಗೇರಿಸುವ ಪ್ರಸಂಗವೊಂದು ಒದಗಿತ್ತು. ಆಗ ಹೊರಹೊಮ್ಮಿದ ಈತನ ಅಭಂಗವಾಣಿ ಹೀಗಿದೆ: ಇನ್ನೆನಿತು ದಿನ ನನ್ನ ಭಕ್ತಿಯನ್ನು ಪರೀಕ್ಷಿಸುವಿಯಯ್ಯಾ? ಉಸಿರು ಗಂಟಲಲ್ಲಿ ನಿಂತಿದೆ. ವಿವಿಧ ಸಂಕಟಗಳು ನನ್ನ ಮೇಲೆ ಎರಗುತ್ತಿವೆ. ಚಿತ್ತವ್ಯಾಕುಲವಾಗಿದೆ; ನೆಮ್ಮದಿಯಿಲ್ಲ. ನಿನ್ನ ಶರಣ ಬರದೆ ಅನ್ಯಗತಿಯಿಲ್ಲ. ಆಕಾಶ ಮೇಲೆ ಕಳಚಿ ಬಿದ್ದರೂ ಬ್ರಹ್ಮಾಂಡ ಪುಡಿಪುಡಿಯಾದರೂ ತ್ರಿಭುವನವನ್ನು ವಡವಾನಲ ಆವರಿಸಿದ್ದರೂ ನಿನ್ನ ಬರವನ್ನೇ ಕಾಯುವೆನಯ್ಯ ನನ್ನನ್ನು ಅನ್ಯರಿಗೆ ಒಪ್ಪಿಸಬೇಡಪ್ಪಾ ಎಂದು ಆರ್ತನಾಗಿ ಕೂಗಿದ ಪರಮಾತ್ಮ ಭಾನುದಾಸನಿಗೆ ಕಾಣಿಸಿಕೊಂಡು ಆತನ ಸಂಕಟ ಪರಿಹರಿಸಿದ ಎಂಬ ಪ್ರತೀತಿ ಇದೆ. ಭಾನುದಾಸನ ಭಕ್ತಿ ಸತಿಪತಿಯರ ಭಕ್ತಿ. ಕೊನೆಯಲ್ಲಿ ಪಂಢರಿನಾಥನ ದರ್ಶನ ಪಡೆದು, ಮುಕ್ತನಾದ ಎನ್ನಲಾಗಿದೆ.
(ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ